ಕೃತಕ ಗರ್ಭಧಾರಣೆ   
 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
ಗಂಡು ಪ್ರಾಣಿಗಳ ವೀರ್ಯವನ್ನು ಕೃತಕ ರೀತಿಯಿಂದ ಸಂಗ್ರಹಿಸಿ ಅದನ್ನು ಯುಕ್ತರೀತಿಯಲ್ಲಿ ತೆಳುಮಾಡಿ ಶೇಖರಿಸಿಟ್ಟು ಬೇಕಾದ ಸಮಯದಲ್ಲಿ ಅದನ್ನು ಅದೇ ಜಾತಿಯ ಹೆಣ್ಣು ಪ್ರಾಣಿಗಳಿಗೆ ಕೃತಕ ರೀತಿಯಿಂದ ಕೊಟ್ಟು ಗರ್ಭಧಾರಣೆ ಮಾಡಿಸುವಿಕೆ. ತಾತ್ತ್ವಿಕವಾಗಿ ಇದನ್ನು ಎಲ್ಲ ಜಾತಿಯ ಪ್ರಾಣಿಗಳಲ್ಲೂ ನಡೆಸಬಹುದು. ಇತ್ತೀಚೆಗೆ ಪಶುಸಂಗೋಪನ ಕಾರ್ಯದಲ್ಲಿ ಈ ಏರ್ಪಾಡು ಬಹಳ ಪ್ರಾಮುಖ್ಯ ಗಳಿಸಿದೆ. ಇದರಿಂದಾಗಿ ತಿಳಿದ ಒಳ್ಳೇ ಬೀಜದ ಹೋರಿಯಿಂದ ಅಥವಾ ಕೋಣದಿಂದ ವೀರ್ಯವನ್ನು ಸಂಗ್ರಹಿಸಿ ಶೇಖರಿಸಿಟ್ಟು ಅಸಂಖ್ಯಾತ ಹಸುಗಳಿಗೆ ಅಥವಾ ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸಿ ಒಳ್ಳೆತರದ ತಳಿಗಳನ್ನು ಪಡೆಯಲಾಗುತ್ತಿದೆ. ಕೃತಕ ಗರ್ಭಧಾರಣೆಯ ಮುಖ್ಯ ಪ್ರಯೋಜನಗಳು ಈ ಕೆಳಗಿನಂತಿವೆ : 1. ಒಂದೇ ಒಂದು ಒಳ್ಳೆ ತಳಿಯ ಬೀಜದ ಹೋರಿಯಿಂದ ಅಸಂಖ್ಯಾತ ಹಸುಗಳಿಗೆ ಗರ್ಭಧಾರಣೆ ಮಾಡಿಸಬಹುದು. ನ್ಯೂಯಾರ್ಕಿನಲ್ಲಿ ಈ ತರದ ವ್ಯವಸ್ಥೆಯಿಂದಾಗಿ ಒಂದು ಹೋರಿಯಿಂದ ಏಳು ವರ್ಷದಲ್ಲಿ 90,000 ಹಸುಗಳಿಗೆ ಗರ್ಭಧಾರಣೆ ಮಾಡಿಸಿದ್ದಾರೆ. 2. ಹೋರಿಗಳ ವೀರ್ಯವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಅಥವಾ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸುಲಭವಾಗಿ ಒಯ್ದು ಪ್ರಯೋಜನ ಪಡೆಯಬಹುದು. 3. ಹಸುಗಳ ನೈಸರ್ಗಿಕ ಗರ್ಭಧಾರಣೆಗಳಿಗೆ ಬೇಕಾಗುವ ಬಹುಸಂಖ್ಯೆಯ ಹೋರಿಗಳನ್ನು ಇಟ್ಟುಕೊಳ್ಳುವ ಪ್ರಸಂಗವನ್ನು ಕಡಿಮೆ ಮಾಡಿ ಬೇಕಾದಷ್ಟು ಉಳಿತಾಯವನ್ನು ಸಾಧಿಸಬಹುದು. 4.ಕೃತಕ ಗರ್ಭಧಾರಣೆಗೆ ಬೇಕಾದ ಕೆಲವು ಹೋರಿಗಳನ್ನು ಸರಿಯಾಗಿ ಪರೀಕ್ಷಿಸಿ, ರೋಗರುಜಿನಗಳಿಲ್ಲದವನ್ನು ಮಾತ್ರ ಇಟ್ಟುಕೊಂಡು ಉಳಿತಾಯವನ್ನು ಸಾಧಿಸಬಹುದು. ದನಗಳಲ್ಲಿ ನೈಸರ್ಗಿಕ ಜೋಡಿಯಿಂದಾಗಿ ಹರಡುವ ಕಾಯಿಲೆಗಳನ್ನು ಈ ವಿಧಾನದಿಂದ ತಡೆಗಟ್ಟಬಹುದು. 5. ಕೃತಕ ಗರ್ಭಧಾರಣೆಯಿಂದ ಬೇಕಾದ ದಾಖಲೆಗಳನ್ನು ಸುಲಭವಾಗಿ ಇಟ್ಟುಕೊಂಡು ಮುಂದೆ ಬೇಕಾಗುವಾಗ ನೋಡಬಹುದಾಗಿದೆ. ತಳಿ ಅಭಿವೃದ್ಧಿಗೆ ಇಂಥ ದಾಖಲೆಗಳು ಬಲು ಅವಶ್ಯಕ. 6. ಸಣ್ಣ ಗಾತ್ರದ ಹಸುಗಳಿಗೆ ದೊಡ್ಡ ಹೋರಿಗಳಿಂದ ಜೋಡಿ ಮಾಡಿಸುವ ಕಷ್ಟಗಳನ್ನು ಮತ್ತು ಆಗಬಹುದಾದ ಅಪಾಯಗಳನ್ನು ನಿವಾರಿಸಬಹುದು. 7. ಅಂಗಹೀನ ಹೋರಿಗಳು ಅಥವಾ ಹಸುಗಳು ಜೋಡಿಯಾಗಲು ಸಾಧ್ಯವಿಲ್ಲದಿರುವಾಗ ರಾಸುಗಳು ಉತ್ತಮವಾಗಿದ್ದರೆ ಕೃತಕ ಗರ್ಭಧಾರಣೆ ಅವುಗಳ ಪೀಳಿಗೆಯನ್ನು ಮುಂದುವರಿಸಲು ಸಹಕಾರಿ.

ತಜ್ಞ ತಾಂತ್ರಿಕರ ಉಸ್ತುವಾರಿಯ ವಿನಾ ಮಾಡಿಸಿದ ಕೃತಕ ಗರ್ಭಧಾರಣೆ ಫಲಕಾರಿ ಆಗದಿರುವುದು ಮಾತ್ರವಲ್ಲ, ಹಲವಾರು ವೇಳೆ ಉಪದ್ರವಕಾರಿಯೂ ಆಗಬಹುದು.

ಕೃತಕ ಗರ್ಭಧಾರಣೆಯಲ್ಲಿ ವೀರ್ಯ ಸಂಗ್ರಹಿಸುವ ಕೆಲಸ ಹೀಗಿದೆ: ಹೆಚ್ಚಿನ ಕಡೆಗಳಲ್ಲಿ ರಬ್ಬರಿನ ಕೃತಕ ಯೋನಿಯೊಂದನ್ನು ತಯಾರು ಮಾಡಿ ಇಟ್ಟುಕೊಳ್ಳುತ್ತಾರೆ. ಹೋರಿ ಹಸುವಿನೊಡನೆ ಜೋಡಿಯಾಗುವ ಸಮಯದಲ್ಲಿ ಅದನ್ನು ಹಸುವಿನ ಬದಿಯಲ್ಲೆ ಇಟ್ಟುಕೊಂಡು ಹೋರಿಯ ಲಿಂಗ ಅದರೊಳಕ್ಕೆ ನೇರವಾಗಿ ಹೋಗುವಂತೆ ತೂರಿಸುತ್ತಾರೆ. ಆಗ ಹೊರಹಾಕಲ್ಪಟ್ಟ ವೀರ್ಯ ಕೃತಕ ಯೋನಿಯೊಳಗೆ ಸಂಗ್ರಹವಾಗುವುದು. ಕೃತಕ ಯೋನಿ ಸಾಧಾರಣವಾಗಿ 18" ಉದ್ದವೂ 3" ಅಗಲವೂ ಇರುವ ಕೊಳವೆ. ಅದರೊಳಗೆ ಸುತ್ತಲೂ ಬಿಸಿನೀರನ್ನೊಳಗೊಂಡ ರಬ್ಬರಿನ ಚೀಲವನ್ನು ಇಟ್ಟಿರುತ್ತಾರೆ. ಈ ಚೀಲದ ಕೊನೆಯಲ್ಲಿ ಒಂದು ಗಾಜಿನ ಪ್ರನಾಳವಿದ್ದು ವೀರ್ಯ ಇದರೊಳಗೆ ಬಂದು ಕೂರುವುದು. ಕೆಲವು ಕಡೆಗಳಲ್ಲಿ ವಿದ್ಯುತ್ತಿನ ಉದ್ದೀಪನೆಯಿಂದ ವೀರ್ಯವನ್ನು ಶೇಖರಿಸುವರು. ಇದಕ್ಕೆ ಗಾಜಿನ ಕೊಳವೆಯಂತಿರುವ ಯಂತ್ರದಲ್ಲಿ ವಿದ್ಯುತ್ತಿನ ಉದ್ದೀಪನೆಯನ್ನು ಮಲದ್ವಾರಕ್ಕೆ ತೂರಿಕೊಟ್ಟು ಉದ್ದೀಪಿಸಿದರೆ ಸೊಂಟದ ಹತ್ತಿರವಿರುವ ನರಗಳು ಉತ್ತೇಜಿತವಾಗಿ ವೀರ್ಯಸ್ಖಲನವಾಗುತ್ತದೆ. ಮಲದ್ವಾರದ ಮುಖಾಂತರ ಆಂಪ್ಯುಲ್ಲವನ್ನು ತಿಕ್ಕಿದಾಗ ಸಹ ಹೀಗಾಗುವುದು. ವೀರ್ಯವನ್ನು ಈ ಪ್ರಕಾರ ಸಂಗ್ರಹಿಸಿದ ಬಳಿಕ ಅದನ್ನು ತೆಳು ಮಾಡಿ ಶೇಖರಿಸಿಡುವ ಕೆಲಸ ಸ್ವಲ್ಪ ಪ್ರಯಾಸದ್ದು. ತಜ್ಞರೇ ಅದನ್ನು ನಿರ್ವಹಿಸಬೇಕು. ಇದಕ್ಕಾಗಿ ಕೆಲವೆಡೆಗಳಲ್ಲಿ ಕೋಳಿಮೊಟ್ಟೆಯ ಹಳದಿ ಭಾಗವನ್ನು ಫಾಸ್ಫೆಟ್ ದ್ರವದಿಂದಲೋ ಸಿಟ್ರೇಟ್ ದ್ರವದಿಂದಲೋ ಸಂಸ್ಕರಿಸಿ ವೀರ್ಯವನ್ನು ಸುಮಾರು ನಾಲ್ಕು ಪಾಲಿನಷ್ಟು ತೆಳು ಮಾಡಿ ಉಪಯೋಗಿಸುತ್ತಾರೆ. ಕೆಲವರು ಕುದಿಸಿದ ಹಾಲಿನಿಂದ ತೆಳು ಮಾಡುತ್ತಾರೆ. ಇತ್ತೀಚೆಗೆ ತೆಂಗಿನಕಾಯಿಯ ನೀರಿನಿಂದ ತೆಳುಮಾಡುವ ವಿಧಾನವನ್ನೂ ಕಲ್ಪಿಸಿದ್ದಾರೆ. ಹೀಗೆ ತೆಳುಮಾಡಿದ ವೀರ್ಯಕ್ಕೆ ಕೀಟಗಳ ತಡೆಯನ್ನು ಎದುರಿಸುವಂತೆ ಕೆಲವು ಪ್ರತಿಜೀವಿ ಔಷಧಿಗಳನ್ನು ಸೇರಿಸಿ ಇಟ್ಟುಕೊಳ್ಳುತ್ತಾರೆ. ಈ ರೀತಿಯಲ್ಲಿ ತೆಳುಮಾಡಿ ಒದಗಿಸಿದ ವೀರ್ಯವನ್ನು ಒಂದು ವಾರದವರೆಗೆ ಶೀತಕ ಯಂತ್ರದಲ್ಲಿ ಇಟ್ಟುಕೊಂಡು ಬೇಕಾದ ಹಾಗೆ 1 ಮಿಲೀ-2 ಮಿಲೀ ನಷ್ಟು  ತೆಗೆದು ಕೃತಕ ಗರ್ಭಧಾರಣೆ ಮಾಡಿಸಬಹುದು. ಇತ್ತೀಚೆಗೆ ವೀರ್ಯವನ್ನು ಗ್ಲಿಸರೋಲ್‍ನೊಡನೆ ಸೇರಿಸಿ ಗಡ್ಡೆ ಕಟ್ಟುವಂತೆ ಶೀತಲ ಮಾಡಿ ಅಂದರೆ ತೇವವನ್ನು ಸುಮಾರು-790 ಸೆಂ. ನಷ್ಟು ಕೆಳಗಿಳಿಸಿದರೆ ಬೇಕಾದಷ್ಟು ಸಮಯ ಶೇಖರಿಸಿ ಇಟ್ಟುಕೊಳ್ಳುವ ಪ್ರಸಂಗವನ್ನು ಕಲ್ಪಿಸಿದ್ದಾರೆ. ಹೀಗೆ ಕಲ್ಪಿಸಿದ ವೀರ್ಯವನ್ನು ಒಂದೆರಡು ವರ್ಷಗಳ ಕಾಲ ಕೂಡ ಶೇಖರಿಸಬಹುದು. ಇಂಥ ತೆಳು ಮಾಡಿದ ವೀರ್ಯವನ್ನು ಪಿಚಕಾರಿಯಲ್ಲಿ ತೆಗೆದುಕೊಂಡು ಸುಮಾರು 16" ಉದ್ದವಿರುವ ಗಾಜಿನ ಅಥವಾ ಪ್ಲಾಸ್ಟಿಕ್ ಸಪುರ ಕೊಳವೆಯ ಮುಖಾಂತರ ಹಸುಗಳ ಯೋನಿಯೊಳಕ್ಕೆ ಹಾಕುವರು. ಹಸುಗಳು ಸರಿಯಾದ ಬೆದೆಯ ಸಮಯದಲ್ಲಿರಬೇಕಾದದ್ದು ಅವಶ್ಯ. ಇಲ್ಲದಿದ್ದಲ್ಲಿ ಗರ್ಭಧಾರಣೆ ಫಲಕಾರಿಯಾಗುವುದಿಲ್ಲ.  
                                                      (ವಿ.ಆರ್.ವಿ.ಎಚ್)